ಚಿದಾನಂದ್ ನಾಯಕ್ ನಿರ್ದೇಶಿಸಿರುವ ಕನ್ನಡದ ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು’ (Sunflowers Were the First Ones to Know) ಎಂಬ ಕಿರುಚಿತ್ರಕ್ಕೆ ಈ ಹಿಂದೆ ಪ್ರತಿಷ್ಠಿತ ಕಾನ್ಸ್ ಚಿತ್ರೋತ್ಸವದಲ್ಲಿ ಅವಾರ್ಡ್ ಸಿಕ್ಕಿತ್ತು. ಇದೀಗ ಕನ್ನಡಿಗರು ಹೆಮ್ಮೆ ಪಡುವಂತಹ ಸಾಧನೆಯನ್ನು ಈ ಕಿರುಚಿತ್ರ ಮಾಡಿದೆ. 2025ನೇ ಸಾಲಿನ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು’ ಕಿರುಚಿತ್ರ ಅರ್ಹತೆ ಪಡೆದುಕೊಂಡಿದ್ದು, ಲೈವ್ ಆ್ಯಕ್ಷನ್ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಸೆಲೆಕ್ಟ್ ಆಗಿದೆ.
ಮೈಸೂರಿನ ಚಿದಾನಂದ್ ನಾಯಕ್ ನಿರ್ದೇಶಿಸಿರುವ ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು’ (Sunflowers Were the First Ones to Know) ಕಿರುಚಿತ್ರವು 2025ನೇ ಸಾಲಿನ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದ್ದು, ಲೈವ್ ಆ್ಯಕ್ಷನ್ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ನಾಮಾಂಕಿತಗೊಂಡಿದೆ. ಇದು ಕನ್ನಡಿಗರ ಹೆಮ್ಮೆಗೆ ಕಾರಣವಾಗಿದೆ.
ಜಾನಪದ ಸೊಗಡಿನ ಕಿರುಚಿತ್ರ
ಈ ಕಿರುಚಿತ್ರವು ಈಗಾಗಲೇ ಕಾನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 2263 ಕಿರುಚಿತ್ರಗಳೊಂದಿಗೆ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ಇದೀಗ ಇದು ಇನ್ನೊಂದು ಹಂತ ಮುಂದೆ ಹೋಗಿ ಆಸ್ಕರ್ ಅಂಗಳ ತಲುಪಿದೆ. ಕನ್ನಡ ಜಾನಪದ ಕಥೆ ಆಧರಿಸಿ ಮಾಡಿರುವ ಈ ಕಿರುಚಿತ್ರದಲ್ಲಿ ಅಜ್ಜಿಯೊಬ್ಬಳು ಹಳ್ಳಿಯಲ್ಲಿದ್ದ ಹುಂಜ ಕದಿಯುತ್ತಾಳೆ. ಆ ಬಳಿಕ ಆ ಊರಿನಲ್ಲಿ ಸೂರ್ಯೋದಯವೇ ಆಗುವುದಿಲ್ಲ. ಆಗ ಆ ಊರಿನವರು ಏನು ಮಾಡುತ್ತಾರೆ ಎಂಬುದೇ ಚಿತ್ರದ ಕಥೆ. ಜಹಾಂಗೀರ್, ವಸುಧಾ, ವಿಶ್ವ ಈ ಕಿರುಚಿತ್ರದಲ್ಲಿ ನಟಿಸಿದ್ದು, ಕೇವಲ ನಾಲ್ಕು ದಿನಗಳಲ್ಲಿ ಇದರ ಚಿತ್ರೀಕರಣ ಪೂರ್ಣಗೊಳಿಸಿರುವುದು ವಿಶೇಷ.
ಇದು ಆಸ್ಕರ್ ತನಕ ಹೋಗಿದ್ದು ಹೇಗೆ?
ಈ ವರ್ಷ ಬೆಂಗಳೂರು ಅಂತಾರಾಷ್ಟ್ರೀಯ ಶಾರ್ಟ್ ಫಿಲ್ಮ್ ಫೆಸ್ಟಿವಲ್ನ ಭಾರತೀಯ ಕಿರುಚಿತ್ರ ವಿಭಾಗದಲ್ಲಿ ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು’ ಮೊದಲ ಪ್ರಶಸ್ತಿ ಪಡೆದಿತ್ತು. ಆಸ್ಕರ್ನಿಂದ ಮಾನ್ಯತೆ ಪಡೆದಿರುವ ಭಾರತದ ಏಕೈಕ ಫಿಲ್ಮ್ ಫೆಸ್ಟಿವಲ್ ಆಗಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಲ್ಲಿ ಪ್ರಶಸ್ತಿ ಗೆದ್ದಿದ್ದಕ್ಕೆ ಈಗ ಆಸ್ಕರ್ನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತು ಎಂದಿದ್ದಾರೆ ನಿರ್ದೇಶಕ ಚಿದಾನಂದ ನಾಯಕ್. “ಆಸ್ಕರ್ ಪೋರ್ಟಲ್ನಲ್ಲಿ ನಮ್ಮ ಕಿರುಚಿತ್ರ ಅಪ್ಲೋಡ್ ಆಗಿದೆ. ಅಲ್ಲಿನ ಸದಸ್ಯರು ಈ ಚಿತ್ರ ವೀಕ್ಷಿಸಿದ ಬಳಿಕ ಡಿಸೆಂಬರ್ 9ರಂದು ಮತದಾನ ನಡೆಯಲಿದೆ. ಬಳಿಕ 15 ಕಿರುಚಿತ್ರಗಳ ಶಾರ್ಟ್ ಲಿಸ್ಟ್ ನಡೆಯಲಿದ್ದು, ಇದರಲ್ಲಿ ಐದು ಸಿನಿಮಾಗಳು ನಾಮನಿರ್ದೇಶನಗೊಳ್ಳಲಿವೆ” ಎಂದು ಚಿದಾನಂದ್ ಮಾಹಿತಿ ನೀಡುತ್ತಾರೆ.
ಆಸ್ಕರ್ ಪ್ರಶಸ್ತಿ ಗೆಲ್ಲುವ ವಿಶ್ವಾಸ
“ವಿಶ್ವದ ಅತ್ಯುನ್ನತ ಸಿನಿಮಾಗಳ ಜತೆಗೆ ನಮ್ಮ ಕನ್ನಡದ ‘Sunflowers Were the First Ones to Know’ ಕಿರುಚಿತ್ರವೂ ಸ್ಪರ್ಧೆಯಲ್ಲಿರುವುದು ಖುಷಿ ನೀಡಿದೆ. ಇದು ಆಸ್ಕರ್ ಪ್ರಶಸ್ತಿ ಗೆಲ್ಲುವ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಸಿನಿಮಾಗಳನ್ನು ಮಾಡಬೇಕು ಎಂದುಕೊಂಡಿದ್ದೇನೆ” ಎಂದು ಚಿದಾನಂದ ನಾಯಕ್ ಹೇಳಿದ್ದಾರೆ.
ಶಿವಣ್ಣ ಅಭಿನಂದನೆ
‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು’ ಶಾರ್ಟ್ ಫಿಲ್ಮ್ ಮೂಲಕ ದೊಡ್ಡ ಸಾಧನೆಗೆ ಕಾರಣವಾಗಿರುವ ಚಿದಾನಂದ್ ನಾಯಕ್ ಅವರಿಗೆ ‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ಅಭಿನಂದನೆಗಳನ್ನು ತಿಳಿಸಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ, ನಿರ್ಮಾಪಕಿ ನಿವೇದಿತಾ ಶಿವರಾಜ್ಕುಮಾರ್ ಸೇರಿದಂತೆ ಅನೇಕರು ಅಭಿನಂದನೆಗಳನ್ನು ಹೇಳಿದ್ದಾರೆ. ಅಂದಹಾಗೆ, ಚಿದಾನಂದ ನಾಯಕ್ ಎಂಬಿಬಿಎಸ್ ಪದವಿಯನ್ನು ಪಡೆದುಕೊಂಡಿದ್ದಾರೆ. ಡಾಕ್ಟರ್ ಆಗಬೇಕಿದ್ದ ಅವರು ಸಿನಿಮಾ ಮೇಲಿನ ಆಸಕ್ತಿಯಿಂದ ಡೈರೆಕ್ಟರ್ ಅಗುವ ಮನಸ್ಸು ಮಾಡಿದರು. ವಿಶೇಷವೆಂದರೆ, ಪುಣೆಯ ಫಿಲ್ಮ್ & ಟೆಲಿವಿಷನ್ ಇನ್ಸ್ಟಿಟ್ಯೂಟ್ನಲ್ಲಿ ಕಲಿತು ಬಂದಿರುವ ಇವರು ಕೆಲ ಕಿರುಚಿತ್ರ, ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ.