ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಪರಿಸ್ಥಿತಿ ಸಲ್ಮಾನ್ ಖಾನ್‌ಗೆ ಬಂದಿದೆ. ಸುತ್ತ ಮುತ್ತ ಅಷ್ಟೊಂದು ಸೆಕ್ಯೂರಿಟಿ ಇದ್ದರೂ ಕೂಡ ಬಾಬಾ ಸಿದ್ದಿಕಿ ಹತ್ಯೆಯ ನಂತರ ಸಲ್ಮಾನ್ ಖಾನ್ ಮುಖದಲ್ಲಿ ಭಯ ಕಾಣುತ್ತಿದೆ. ಯಾವತ್ತು ಎಲ್ಲಿಂದ ಯಾರು ಬಂದು ತನ್ನ ಮೇಲೆ ಹಲ್ಲೆ ಮಾಡುತ್ತಾರೋ ಏನೋ ಎನ್ನುವ ಯೋಚನೆಯಲ್ಲಿಯೇ ಸಲ್ಮಾನ್ ಖಾನ್ ಓಡಾಡುವಂತಾಗಿದೆ.
ಇನ್ನೂ.. ಈ ಪರಿಸ್ಥಿತಿಯಿಂದ ಹೊರ ಬರಬೇಕಾದರೆ ಕ್ಷಮೆ ಕೇಳಬೇಕೆಂದು ಬಿಷ್ಣೋಯ್ ಆಂಡ್ ಗ್ಯಾಂಗ್ ಆಗ್ರಹಿಸಿದೆ. ದೇವಸ್ಥಾನಕ್ಕೆ ಬಂದು ಕೃಷ್ಣ ಮೃಗ ಕೊಂದಿದ್ದಕ್ಕೆ ಪ್ರಾಯಶ್ಚಿತವನ್ನು ಪಡಬೇಕೆಂದು ಹೇಳಿದೆ. ಆದರೆ, ಸಲ್ಮಾನ್ ಖಾನ್ ಸುತಾರಾಂ ಇದಕ್ಕೆ ಒಪ್ಪುತ್ತಿಲ್ಲ. ಇದರ ನಡುವೆ ಸಲ್ಮಾನ್ ಖಾನ್‌ಗೆ ಒಂದಾದ ಮೇಲೊಂದರಂತೆ ಬೆದರಿಕೆ ಕರೆಗಳು ಬರುತ್ತಿವೆ. ಸಲ್ಮಾನ್ ಖಾನ್ ಪ್ರಾಣ ತೆಗೆಯುವುದಾಗಿ ಹುಬ್ಬಳ್ಳಿಯಲ್ಲಿರುವ ವ್ಯಕ್ತಿ ಬೆದರಿಕೆ ಹಾಕಿರುವುದು ಕೂಡ ಬೆಳಕಿಗೆ ಬಂದಿದೆ.
ಹೌದು, ಕೇಳಲು ಅಚ್ಚರಿ ಎನಿಸಿದರೂ ಇದು ನಿಜಾ. ಹುಬ್ಬಳ್ಳಿಯಲ್ಲಿರುವ ವ್ಯಕ್ತಿಯೊರ್ವ ತನ್ನನ್ನು ತಾನು ಲಾರೆನ್ಸ್ ಬಿಷ್ಣೋಯ್ ಸಹೋದರ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಮುಂಬೈ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಮ್‌ನ ಸಹಾಯವಾಣಿ ವಾಟ್ಸಾಫ್ ಸಂಖ್ಯೆಗೆ ಸಲ್ಮಾನ್ ಖಾನ್ ಕೂಡಲೇ ಕ್ಷಮೆ ಕೇಳಬೇಕು, ಇಲ್ಲದಿದ್ದರೆ 5 ಕೋಟಿ ಹಣ ನೀಡಬೇಕು ಎಂದು ಸಂದೇಶವನ್ನು ಕಳುಹಿಸಿದ್ದಾನೆ. ತನ್ನ ಈ ಎರಡು ಬೇಡಿಕೆಯಲ್ಲಿ ಒಂದನ್ನು ಪೂರೈಸದೇ ಇದ್ದರೆ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
ಇನ್ನೂ ಸಲ್ಮಾನ್ ಖಾನ್ ವಿಚಾರದಲ್ಲಿ ಮೊದಲಿಂದ ಮೈಯೆಲ್ಲಾ ಕಣ್ಣಾಗಿಸಿಕೊಂಡು ಕೆಲಸ ಮಾಡುತ್ತಿರುವ ಮುಂಬೈ ಪೊಲೀಸರು, ಸಲ್ಮಾನ್ ವಿಚಾರವಾಗಿ ಬಂದ ಕರೆ ಮತ್ತು ಸಂದೇಶಗಳನ್ನು ಲಘುವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿಯೇ ಸಲ್ಮಾನ್ ಖಾನ್ ಗೆ ಈ ವ್ಯಕ್ತಿ ಬೆದರಿಕೆ ಹಾಕಿದ ಹಿನ್ನೆಲೆ ಎಚ್ಚೆತ್ತ ಪೊಲೀಸರು ಬೆದರಿಕೆ ಹಾಕಿದ ವ್ಯಕ್ತಿಯನ್ನು ಹುಡುಕುತ್ತಾ ಕರ್ನಾಟಕಕ್ಕೆ ಬಂದಿದ್ದಾರೆ. ಬೆದರಿಕೆ ಹಾಕಿರುವ ವ್ಯಕ್ತಿ ಹುಬ್ಬಳ್ಳಿಯಲ್ಲಿದ್ದಾನೆ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಸದ್ಯ ಬೆದರಿಕೆ ಹಾಕಿರುವ ವ್ಯಕ್ತಿ ಹುಬ್ಬಳ್ಳಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಎನ್ನುವ ಮಾಹಿತಿ ಹೊರ ಬಿದ್ದಿದ್ದು, ಈತನ ವಯಸ್ಸು 35 ಎಂದು ಹೇಳಲಾಗುತ್ತಿದೆ. ಮುಂಬೈನ ವರ್ಲಿ ಪೊಲೀಸರು ಈತನ ವಿಚಾರಣೆಯನ್ನು ನಡೆಸುತ್ತಿದ್ದು ಇನ್ನೂ ಬಂಧಿಸಿಲ್ಲ ಅನ್ನುವ ಮಾತು ಕೇಳಿ ಬರುತ್ತಿದೆ. ನಿಜಕ್ಕೂ ಲಾರೆನ್ಸ್ ಬಿಷ್ಣೋಯ್ ಜೊತೆ ಈ ವ್ಯಕ್ತಿಯ ಸಂಬಂಧ ಇದೆಯಾ ಅಥವಾ ಸುಮ್ ಸುಮ್ನೆ ತಮಾಷೆಗಾಗಿ ಈ ತರಹದ ಕೆಲಸ ಮಾಡಿದ್ದಾನಾ ಎನ್ನುವ ವಿಚಾರಣೆಯನ್ನು ಮಾಡಲಾಗುತ್ತಿದೆ.