ಉಷಾ ಉಥುಪ್ ವಿಶಿಷ್ಟ ಧ್ವನಿಯ ಹಾಡುಗಾರ್ತಿ. ಪಾಪ್, ಫಿಲ್ಮಿ, ಜಾಜ್ ಹಾಡುಗಳು ಮತ್ತು ಚಲನಚಿತ್ರ ಹಿನ್ನೆಲೆಗಾಯನದಿಂದ ಪ್ರಸಿದ್ಧರಾಗಿದ್ದಾರೆ.
ಉಷಾ ಅವರು 1947ರ ನವೆಂಬರ್ 8ರಂದು ಮುಂಬೈನಲ್ಲಿ ನೆಲೆಸಿದ್ದ ತಮಿಳು ಅಯ್ಯರ್ ಕುಟುಂಬದಲ್ಲಿ ಜನಿಸಿದರು. ಶಾಲೆಯಲ್ಲಿ ಓದುವಾಗ ಅವರ ಧ್ವನಿ ಒಗ್ಗುವಂತದ್ದಲ್ಲ ಎಂದು ಸಂಗೀತ ತರಗತಿಯಿಂದ ಹೊರಗುಳಿಯಬೇಕಾಯಿತಂತೆ. ಆದರೂ ಒಬ್ಬ ಸಂಗೀತ ಶಿಕ್ಷಕರಿಗೆ ಈಕೆಯ ಧ್ವನಿಯಲ್ಲಿ ಏನೊ ವಿಶಿಷ್ಟತೆ ಇದೆ ಅನಿಸಿತಂತೆ. ಮನೆಯಲ್ಲಿ ತಂದೆ ತಾಯಿಯರು ಪಾಶ್ಚಾತ್ಯ ಮತ್ತು ಎಲ್ಲ ರೀತಿಯ ಭಾರತೀಯ ಸಂಗೀತ ಕೇಳುವ ಹವ್ಯಾಸ ಇದ್ದ ವಾತಾವರಣದಿಂದ ಸಂಗೀತಾಭಿರುಚಿ ಉಷಾ ಜೊತೆಗೆ ಸದಾ ಇತ್ತು.
ಆಕಾಶವಾಣಿಯ ಮಹಾನ್ ಧ್ವನಿಯುಳ್ಳ ಕಾರ್ಯಕ್ರಮ ಪ್ರಸ್ತುತಕಾರರಾಗಿದ್ದ ಅಮೀನ್ ಸಯಾನಿ ಅವರ ಮೂಲಕ ಉಷಾ ಅವರಿಗೆ ಸಾರ್ವಜನಿಕವಾಗಿ ಹಾಡುವ ಮೊದಲ ಅವಕಾಶ ದೊರಕಿತು. ಮುಂದೆ ಅವರು ಚೆನ್ನೈ, ಮುಂಬೈ ನಗರಗಳ ಕೆಲವು ಪ್ರತಿಷ್ಠಿತ ಕ್ಲಬ್ಗಳಲ್ಲಿ ಹಾಡುತ್ತಿದ್ದರು. ಒಮ್ಮೆ ದೇವಾನಂದ್ ಅವರ ಗಮನಕ್ಕೆ ಬಂದ ಇವರು ಮುಂದೆ ಚಿತ್ರರಂಗಕ್ಕೆ ಬಂದರು. ಎಲ್ಲ ಭಾಷೆಗಳಲ್ಲಿ ಹಾಡಿದರು. ಕೆಲವು ಚಿತ್ರಗಳಲ್ಲಿ ಪಾತ್ರವಹಿಸಿದರು. ವಿದೇಶಗಳಲ್ಲಿ ಕೂಡಾ ಹಾಡಿದರು. ಅನೇಕ ಕಿರುತೆರೆಯ ಕಾರ್ಯಕ್ರಮಗಳ ತೀರ್ಪುಗಾರರಾಗಿಯೂ ಮೂಡಿಬಂದಿದ್ದಾರೆ.
ಉಷಾ ಅವರು ಕೇರಳ ಮೂಲದ ಜಾನಿ ಚಾಕೊ ಉಥುಪ್ ಅವರನ್ನು ವಿವಾಹವಾಗಿ ಉಷಾ ಉಥುಪ್ ಆಗಿದ್ದಾರೆ. ಅವರಿಗೆ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. ಅವರು ಕನ್ನಡದಲ್ಲೂ ಹಿಂದಿನ ಮತ್ತು ಪ್ರಸಕ್ತ ತಲೆಮಾರಿನ ಅನೇಕ ಚಿತ್ರಗಳಿಗೆ ಹಾಡಿದ್ದಾರೆ.